ಬಾಕ್ರ್ಲಿ, ಜಾರ್ಜ್
1685-1753. ಪಾಶ್ಚಾತ್ಯ ತತ್ತ್ವಶಾಸ್ತ್ರಜ್ಞ, ಈಶ್ವರವಾದಿ. ಹುಟ್ಟಿದ್ದು ಐರ್ಲೆಂಡಿನ ಕಿಲ್‍ಕೆನಿ ಎಂಬಲ್ಲಿ. ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, 1700 ರಲ್ಲಿ ಡಬ್ಲಿನಿನ ಟ್ರಿನಿಟಿ ಕಾಲೇಜ್ ಸೇರಿದ. ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಭಾನ್ವಿತನೆಂದು ಹೆಸರುಗಳಿಸಿ 1704 ರಲ್ಲಿ ಪದವಿ ಪಡೆದ. 1707ರಲ್ಲಿ ಟ್ರಿನಿಟಿಯಲ್ಲಿಯೇ ಟ್ಯೂಟರ್ ಆಗಿಯೂ 1709ರಲ್ಲಿ ಚರ್ಚಿನ ಪಾದ್ರಿ ಆಗಿಯೂ ನೇಮಕಗೊಂಡ. ಇದೇ ವೇಳೆ (1709) ಈತ ಎ ಎಸ್ಸೆ ಟುವಡ್ರ್ಸ್ ಎ ನ್ಯೂ ತಿಯರಿ ಆಫ್ ವಿಷನ್ ಎಂಬ ಕೃತಿಯನ್ನು ಪ್ರಕಟಿಸಿದ. ಅದರಲ್ಲಿ ಧರ್ಮ ಶ್ರದ್ಧೆಯನ್ನು ಎತ್ತಿ ಹಿಡಿದು ಭೌತಿಕವಾದಿಗಳನ್ನು ಖಂಡಿಸಿದ. ಹರಿತವಾದ ಬುದ್ಧಿಶಕ್ತಿ, ಸೂಕ್ಷ್ಮಸಂವೇದನೆಯ ಮನಸ್ಸು, ಪ್ರತಿಭೆ ಮತ್ತು ಪ್ರೇಮಲ ಸ್ವಭಾವಗಳಿಂದಾಗಿ ಈತ ಶ್ರದ್ಧಾವಂತರ ಮುಖಂಡನಾದ.

1710ರಲ್ಲಿ ಬಾಕ್ರ್ಲಿ ಪ್ರಕಟಿಸಿದ ಎ ಟ್ರೀಟೈಸ್ ಕನ್ಸರ್ನಿಂಗ್ ದಿ ಪ್ರಿನ್ಸಿಪಲ್ಸ್ ಆಫ್À ಹ್ಯೂಮನ್ ನಾಲೆಜ್ ಎಂಬ ಕೃತಿ ವಾದವಿವಾದಗಳಿಗೆ ಎಡೆಮಾಡಿಕೊಟ್ಟಿತು. ಮೊದಲನೆಯದರಲ್ಲಿ ಈತ ಅಭೌತಿಕ ಮೂಲತತ್ತ್ವವನ್ನು ಪ್ರತಿಪಾದಿಸಿದ್ದರೆ, ಎರಡನೆಯದರಲ್ಲಿ ಇಂದ್ರಿಯಗ್ರಾಹ್ಯವಲ್ಲದ ವಸ್ತು ವಿಷಯಗಳು ಅಸ್ತಿತ್ವವನ್ನು ಹೊಂದಿರಲಾರವು ಎಂದು ವಿಶ್ಲೇಷಿಸಿದ್ದ. 1712ರಲ್ಲಿ ಈತ ಡಬ್ಲಿನಿನಲ್ಲಿ ಜೂನಿಯರ್ ಗ್ರೀಕ್ ಅಧ್ಯಾಪಕನಾಗಿ ನೇಮಕಗೊಂಡ. 1713ರಲ್ಲಿ ಲಂಡನಿಗೆ ಬಂದಾಗ ಜೀವನದಲ್ಲಿ ಈತ ಇನ್ನೊಂದು ಘಟ್ಟ ಏರಿದ ಎನ್ನಬಹುದು. ಅಡಿಸನ್, ಸ್ವಿಫ್ಟ್, ಪೋಪ್ ಮತ್ತು ಸ್ಟೀಲ್ ಮುಂತಾದ ಪ್ರಬಂಧಕಾರರ ಸಹವಾಸದಲ್ಲಿ ಈತನ ಪ್ರತಿಭೆ ವಿಕಾಸಗೊಂಡಿತು. ಸ್ಟೀಲ್ ಪ್ರಕಟಿಸುತ್ತಿದ್ದ ಗಾರ್ಡಿಯನ್ ಪತ್ರಿಕೆಗೆ ಲೇಖನ ಬರೆದು ತನ್ನ ಅಭಿಪ್ರಾಯಗಳನ್ನು ಜನರ ಮುಂದೆ ಇಟ್ಟ. ಮುಂದೆ ಇಂಗ್ಲೆಂಡಿನ ರಾಣಿಯಾಗಿದ್ದ ವೇಲ್ಸ್‍ನ ರಾಜಕುಮಾರಿಯ ಮತ್ತು ಬುದ್ಧಿಜೀವಿಗಳ ಪರಿಚಯವೂ ಆಯಿತು. ಆಸ್ತಿಕ ಜನರ ಬೆಂಬಲ ದೊರೆತು ಅನುಯಾಯಿಗಳು ಹುಟ್ಟಿಕೊಂಡರು. ಅಂತೆಯೇ ವಿರೋಧಿಗಳೂ ಬೆಳೆದರು. ಈ ಮಧ್ಯೆ ಸಿಸಿಲಿಯಲ್ಲಿ ಇಂಗ್ಲೆಂಡಿನ ರಾಯಭಾರಿಯಾಗಿದ್ದ ಪೀಟರ್ ಬರೊ ಜೊತೆಯಲ್ಲಿ ಧಾರ್ಮಿಕ ಸಲಹೆಗಾರನಾಗಿ ಯೂರೋಪಿನಲ್ಲೆಲ್ಲಾ ಪ್ರವಾಸ ಮಾಡಿದ. ಇದೇ ವೇಳೆ ತನ್ನ ತ್ರೀ ಡಯಾಲಾಗ್ಸ್ ಬಿಟ್ವೀನ್ ಹೈಲಸ್ ಅಂಡ್ ಫಿಲನಸ್ ಎಂಬ ಕೃತಿಯನ್ನು ಪ್ರಕಟಿಸಿದ. ಅದರಲ್ಲಿ ಹೈಲಸ್ ಮತ್ತು ಫಿಲನಸ್ ಎಂಬಿಬ್ಬರು ಕಾಲ್ಪನಿಕ ವ್ಯಕ್ತಿಗಳನ್ನು ಸೃಷ್ಟಿಸಿ ಪ್ರಶ್ನೆ ಮತ್ತು ಉತ್ತರಗಳ ಮೂಲಕ ಓದುಗರನ್ನು ಆಕರ್ಷಿಸಿದ. ಪುನಃ 1715ರಲ್ಲಿ ಯೂರೋಪ್ ಪ್ರವಾಸವನ್ನು ಕೈಗೊಂಡು 1720ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದಾಗ ಈತನಿಗೆ ಒಂದು ರೀತಿಯ ನಿರಾಶೆ ಕಾದಿತ್ತು. ಇಂಗ್ಲೆಂಡಿನ ಜನತೆಯಲ್ಲಿ ಯಾವುದೋ ಲೋಪವಿದೆಯೆಂದು ಭಾವಿಸಿ ಇಂಗ್ಲಿಷ್ ಸಮಾಜದ ಬಗ್ಗೆ ತನ್ನ ವಿಷಾದವನ್ನು ವ್ಯಕ್ತಪಡಿಸಿದ. 1721ರಲ್ಲಿ ಡಿ ಮಾಟು ಎಂಬ ಕೃತಿಯನ್ನು ಲ್ಯಾಟಿನ್ ಭಾಷೆಯಲ್ಲಿ ರಚಿಸಿದ. ಜನರನ್ನು ಸುಧಾರಿಸುವುದಕ್ಕೆ ಶಿಕ್ಷಣದ ವ್ಯವಸ್ಥೆಯನ್ನು ಸುಧಾರಿಸಲು ಇಚ್ಛಿಸಿದ. ಶೈಕ್ಷಣಿಕ ಸುಧಾರಣೆಯ ಹಂಬಲ ಆತನ ಹೃದಯವನ್ನು ವ್ಯಾಪಿಸಿಕೊಂಡಿದ್ದಂತೆಯೇ, ಡಬ್ಲಿನ್‍ಗೆ ಹೋಗಿ ಅಲ್ಲಿ ಸೀನಿಯರ್ ಅಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದ. ಅನಂತರ ಡೆರ್ರಿಯ ಡೀನ್ ಆಗಿ ಅಧಿಕಾರ ವಹಿಸಿಕೊಂಡ.

1734ರಲ್ಲಿ ಈತ ಐರ್ಲೆಂಡಿನ ಕ್ಲಾಯ್ನ್ ಪ್ರದೇಶದ ಬಿಷಪ್ ಆಗಿ ಅಧಿಕಾರ ವಹಿಸಿಕೊಂಡ. ಜನತೆಯ ಬಡತನವನ್ನು ಕಂಡು ಆರ್ಥಿಕ ಸುಧಾರಣೆಗೆ ಏನು ಮಾಡಬೇಕೆಂದು ಆಲೋಚಿಸತೊಡಗಿದ. ಅದೇ ವರ್ಷ ಅನ್ ಅನಾಲಿಸ್ಟ್ ಎಂಬ ಚಿಕ್ಕ ಪುಸ್ತಕವನ್ನು ರಚಿಸಿದ. 1744ರಲ್ಲಿ ಸೆರಿಸ್, ಎ ಚೈನ್ ಆಫ್ ಫಿಲಾಸಾಫಿಕಲ್ ರೆಫ್ಲೆಕ್ಷನ್ಸ್ ಎಂಬ ಕೃತಿಯನ್ನು ಪ್ರಕಟಿಸಿದ. 1752ರ ವೇಳೆಗೆ ಈತನ ಆರೋಗ್ಯ ಕೆಡಲಾರಂಭಿಸಿತು. ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಮತ್ತು ತನ್ನ ಮಗನನ್ನು ಕ್ರೈಸ್ಟ್ ಕಾಲೇಜಿಗೆ ಸೇರಿಸುವ ಉದ್ದೇಶದಿಂದ ಆಕ್ಸ್‍ಫರ್ಡ್‍ಗೆ ಬಂದ. ಆದರೆ ಆರೋಗ್ಯ ಇನ್ನೂ ಕೆಟ್ಟುಹೋಗಿ, ಆಕ್ಸ್‍ಫರ್ಡ್‍ನಲ್ಲಿದ್ದಂತೆಯೇ 1753ರ ಜನವರಿಯಲ್ಲಿ ಹೃದಯಸ್ತಂಭನದಿಂದ ದೈವಾಧೀನನಾದ.

ಬಾಕ್ರ್ಲಿಯನ್ನು ಇಂದ್ರಿಯವಾದಿ ಎಂದು ಕರೆದರೆ ತಪ್ಪಾಗಲಾರದು. ಭೌತಿಕ ವಸ್ತುಗಳ ಸ್ವತಂತ್ರ ಅಸ್ತಿತ್ವವನ್ನು ಈತ ಒಪ್ಪುವುದಿಲ್ಲ. ಈತನ ದೃಷ್ಟಿಯಲ್ಲಿ ವಸ್ತುವೆಂದರೆ ಸಂವೇದನೆಗಳ ಸಮೂಹ. ವಸ್ತುಗಳು ಇವೆಯೆನ್ನಬೇಕಾದರೆ ಅವು ಇಂದ್ರಿಯಗಳಿಗೆ ಗೋಚರವಾಗಬೇಕು. ಇಂದ್ರಿಯಗಳಿಗೆ ಗೋಚರವಾಗದ ವಸ್ತುಗಳನ್ನು ಇವೆಯೆಂದು ಹೇಳಲಾಗದು. ರೂಪ, ಶಬ್ದ, ವಾಸನೆ, ರುಚಿ, ಸ್ಪರ್ಶಗಳಿಂದ ವಸ್ತುಗಳ ಅನುಭವ ಉಂಟಾಗುತ್ತದೆ. ಈ ಅನುಭವ ಮನಸ್ಸಿನಲ್ಲಿ ಸಂಗ್ರಹಗೊಳ್ಳುತ್ತದೆ. ಇರುವುವೆಂದರೆ ಕಾಣಿಸಿಕೊಳ್ಳುವುದು-ಇದು ಈತನ ವಾದ. ಬಾಹ್ಯ ಪ್ರಪಂಚ ಪರಿವರ್ತನಶೀಲವಾದುದು. ಇಂದ್ರಿಯಗಳು ಗ್ರಹಿಸದೆ ವಸ್ತುಗಳ ನೈಜಸ್ವರೂಪ ಗೋಚರಿಸುವುದಿಲ್ಲ. ಆತ್ಮ ಅಥವಾ ಮನಸ್ಸು ತನ್ನ ಅಸ್ತಿತ್ವವನ್ನು ಸಾಧಿಸಿ ತೋರಿಸಬೇಕಾದುದಿಲ್ಲ. ಅದು ಸ್ವಯಂವೇದ್ಯ ಸತ್ಯ. ಆದರೆ ವಸ್ತುಗಳು ಜಡ. ಅವುಗಳ ಸ್ವರೂಪವನ್ನು ಚೈತ್ಯಾತ್ಮಕವಾದ ಮನಸ್ಸು ಗ್ರಹಿಸಬೇಕು. ಸಂವೇದನೆಗಳು ಪ್ರಪಂಚದಲ್ಲಿರುತ್ತವೆ. ಈ ಸಂವೇದನೆಗಳನ್ನು ಮನಸ್ಸು ಅರ್ಥಮಾಡಿಕೊಳ್ಳುತ್ತದೆ. ಇವು ಎಲ್ಲಿಂದ ಬಂದುವು ಎಂಬ ಪ್ರಶ್ನೆಯನ್ನು ತನಗೆ ತಾನೇ ಹಾಕಿಕೊಂಡು ಯುಕ್ತ ಉತ್ತರ ಕಂಡುಕೊಂಡಿದ್ದಾನೆ. ಸಂವೇದನೆಗಳನ್ನು ತಾನೇ ಆಗಲೀ, ಇತರರಾಗಲೀ ಸೃಷ್ಟಿಸಿಲ್ಲ. ಅಂದಮೇಲೆ ಇವನ್ನು ಸೃಷ್ಟಿಸಿದವರಾರು? ಇಲ್ಲಿ ಬಾಕ್ರ್ಲಿ ತಾರ್ಕಿಕ ಆಲೋಚನೆಯನ್ನು ಅವಲಂಬಿಸಿ, ಅದರ ಮೂಲಕ ಈಶ್ವರನ ಅಸ್ತಿತ್ವ ಸಾಧಿಸಿದ್ದಾನೆ. ಈಶ್ವರನನ್ನು ತಾರ್ಕಿಕವಾಗಿ ಮಾತ್ರ ಅರಿಯಬಲ್ಲೆವು ಎನ್ನುತ್ತಾನೆ. ಈಶ್ವರನೇ ಸಂವೇದನೆಗಳ ಸೃಷ್ಟಿಕರ್ತ, ಪ್ರಕೃತಿ ಈಶ್ವರನ ಮಹಾಸಂದೇಶ. ಈಶ್ವರವಾದಿಯಾದ ಈತ ಸಂವೇದನೆಗಳಿಗೆ ದೈವಿಕ ಮೌಲ್ಯ ಕೊಟ್ಟಿದ್ದಾನೆ. ಮೂರು ಸ್ವತಂತ್ರ ಅಂಶಗಳ ಅಸ್ತಿತ್ವವನ್ನು ತೋರಿಸಿಕೊಟ್ಟಿದ್ದಾನೆ. ಮೊದಲನೆಯದಾಗಿ ವ್ಯಕ್ತಿ ಅಥವಾ ಆತ್ಮ ಅಥವಾ ಮನಸ್ಸು. ಎರಡನೆಯದು ಸಂವೇದನೆಗಳ ಸಮೂಹ (ವಸ್ತು). ಮೂರನೆಯದು ಸಂವೇದನೆಗಳನ್ನು ಸೃಷ್ಟಿಸಿದ ಶಕ್ತಿ (ಈಶ್ವರ). ಆದ್ದರಿಂದ ಈಶ್ವರನೇ ಸೃಷ್ಟಿಸಿದ ವಸ್ತುಗಳನ್ನು ತುಚ್ಛವಾದವೆಂದು ತಿರಸ್ಕರಿಸುವುದು ಸರಿಯಲ್ಲವೆಂದು ವಾದಿಸಿದ್ದಾನೆ.							(ಎಂ.ಆರ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ